ಕ್ರಾಕೋತಿ

ಮಕಾಕ ಇರಸ್ ಅಥವಾ ಸೈನೊಮಾಲ್ಗಸ್ ಇರಸ್ ಎಂಬ ಶಾಸ್ತ್ರೀಯ ಹೆಸರಿನ ಪ್ರಭೇದದ ಹಲವಾರು ಉಪಪ್ರಭೇದಗಳ ಕೋತಿಗಳಿಗೆ ಇರುವ ಸಾಮಾನ್ಯ ಹೆಸರು.  ಪ್ರೈಮೇಟ್ ಗಣದ ಸೈನೊಪಿತಿಕಾಯ್ಡೀ ಕುಟುಂಬಕ್ಕೆ ಸೇರಿದೆ.  ಮಲಯ ಪರ್ಯಾಯದ್ವೀಪದ ಕ್ರಾ ಭೂಕಂಠ, ನಿಕೋಬಾರ್, ಸುಮಾತ್ರ, ಜಾವ, ಬಾಲಿ, ಬೋರ್ನಿಯೊ ಮುಂತಾದ ದೇಶಗಳ ಸಮುದ್ರತೀರಪ್ರದೇಶಗಳಲ್ಲಿ ವಾಸಿಸುತ್ತದೆ.  ಭಾರತದಲ್ಲಿ ಇದನ್ನು ಬಂಗಾಳದಲ್ಲಿ ಕಾಣಬಹುದು. (ಎಸ್.ಎನ್.ಕೆ.ಯು.)
ಕ್ರಾ ಕೋತಿ ನೋಡಲು ಹೆಚ್ಚು ಕಡಿಮೆ ಭಾರತದಲ್ಲಿ ಎಲ್ಲೆಡೆ ಕಾಣಬರುವ ರೀಸಸ್ ಕೋತಿಯಂತೆಯೇ ಇದೆ.  ದೇಹದ ಬಣ್ಣ ಕಂದು, ಹಳದಿಮಿಶ್ರ ಇಲ್ಲವೆ ಬೂದು ಮಿಶ್ರ ಕಂದು ಮುಂತಾಗಿ ವ್ಯತ್ಯಾಸ ವಾಗುತ್ತದೆ.  ಬಾಲ ಬಲು ಉದ್ದ, ಮುಖದ ಸುತ್ತ ಅಂಚು ಕಟ್ಟಿದಂತೆ ಕೂದಲಿವೆ.  ಪೃಷ್ಠದ ಮೇಲೆ ನಸುಗೆಂಪು ಬಣ್ಣದ ಗುರುತುಗಳಿವೆ.

ಸಾಮಾನ್ಯವಾಗಿ ಸಮುದ್ರ ತೀರಗಳಲ್ಲೆ ಇದರ ವಾಸ.  ಬಹುಪಾಲು ಪ್ರಭೇದಗಳು ಕಡಲತೀರದಲ್ಲಿನ ಮ್ಯಾಂಗ್ರೋವ್ ತೋಟಗಳಲ್ಲಿದ್ದು ಹಗಲೆಲ್ಲ ಏಡಿಗಳನ್ನು ಹಿಡಿಯುತ್ತ, ಈಜುತ್ತ ಕಾಲ ಕಳೆಯುತ್ತವೆ.  ಏಡಿಗಳು, ಕಠಿಣಚರ್ಮಿಗಳು ಮತ್ತು ಕೆಲವು ಬಗೆಯ ಮೃದ್ವಂಗಿಗಳೇ ಇದರ ಪ್ರಧಾನ ಆಹಾರ.  ಏಡಿಗಳಂತೂ ಇದಕ್ಕೆ ಬಲು ಅಚ್ಚುಮೆಚ್ಚು.  ಇದರಿಂದಾಗಿಯೇ ಈ ಕೋತಿಗೆ ಏಡಿಭಕ್ಷಕ ಕೋತಿ (ಕ್ರ್ಯಾಬ್ ಈಟಿಂಗ್ ಮಕಾಕ್) ಎಂಬ ಹೆಸರು ಬಂದಿದೆ.  ಈ ಬಗೆಯ ಆಹಾರ ಸೇವನೆ ಕೋತಿಗಳಲ್ಲಿ ಬಹಳ ಅಪೂರ್ವ.  ಬಹುಶಃ ಈ ಕೋತಿಗಳು ತಾವು ಈಗ ವಾಸ ಮಾಡುವ ನೆಲೆಗಳಿಗೆ ಬೇರೆಲ್ಲಿಂದಲೋ ಬಂದುವೆಂದೂ ಇವು ಬರುವ ವೇಳೆಗೆ ಅಲ್ಲಿನ ಬಹುಪಾಲು ಪ್ರದೇಶವೆಲ್ಲ ಬೇರೆ ಬಗೆಯ ಕೋತಿಗಳಿಂದ ತುಂಬಿಕೊಂಡಿದ್ದು ಕ್ರಾ ಕೋತಿಗಳು ಸಮುದ್ರ ತೀರವಾಸಿಗಳಾಗಬೇಕಾಯಿತೆಂದೂ ಊಹೆಯಿದೆ.  ಕಡಲತೀರಗಳಲ್ಲಿ ಬೇರೆ ಬಗೆಯ ಆಹಾರ ವಿರಳವಾಗಿರುವುದರಿಂದ ಇವು ಏಡಿ ಮುಂತಾದ ಕಡಲ ಪ್ರಾಣಿಗಳನ್ನೆ ತಿನ್ನಬೇಕಾಯಿತು.  ಏಡಿ ಮುಂತಾದವು ಮಾತ್ರ ಈ ಕೋತಿಗಳ ಆಹಾರವೆಂದು ಇದರ ಅರ್ಥವಲ್ಲ.  ಹಣ್ಣು, ಧಾನ್ಯ ಮುಂತಾದ ಸಸ್ಯಾಹಾರಗಳನ್ನು ಮೆಚ್ಚಿನಿಂದ ಇವು ಭಕ್ಷಿಸುತ್ತವೆ.

ಬಾಲಿ ದ್ವೀಪಗಳಲ್ಲಿ ಕ್ರಾ ಕೋತಿಯನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ.               		 *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ